Belagavi: ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟ ಸುದೀಪ್ ಅಭಿಮಾನಿ..!
ಬಡ ಅಜ್ಜಿಯೊಬ್ಬಳು ತಂದೆ-ತಾಯಿ ಇಲ್ಲದ 9 ಮೊಮ್ಮಕ್ಕಳೊಂದಿಗೆ ಪಡಬಾರದ ಕಷ್ಟ ಪಡುತ್ತಿದ್ದಾಳೆ. ಇರಲು ಸೂರು ಇಲ್ಲ, ಸರ್ಕಾರದ ಒಂದು ಸೌಲಭ್ಯವೂ ಇಲ್ಲದೇ, 9 ಮೊಮ್ಮಕ್ಕಳೊಂದಿಗೆ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. ಇಂತಹ ಅಜ್ಜಿಯ ನೆರವಿಗೆ ನಟ, ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಮುಂದೆ ಬಂದಿದ್ದು, ತನ್ನ ನೆಚ್ಚಿನ ನಟನ ಹುಟ್ಟುಹಬ್ಬದ ದಿನದಂದು ಈ ಬಡ ಕುಟುಂಬಕ್ಕೆ ಮನೆಯನ್ನು ಗಿಫ್ಟ್ ಕೊಡುತ್ತಿದ್ದಾರೆ.
ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹೊಳಿ ಗ್ರಾಮದ ಈ ಕುಟುಂಬದ ಕಣ್ಣೀರಿನ, ಕರುಣಾಜನಕ ಕಥೆ ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣಲ್ಲೂ ಕಣ್ಣೀರು ಜಿನುಗದೇ ಇರದು. ನೀವು ನೋಡುತ್ತಿರುವ ಈ ಅಜ್ಜಿ ಹೆಸರು ರತ್ನಮ್ಮ ಚಂದೂರ ಅಂತಾ. ಇವರಿಗೆ 9 ಜನ ಮೊಮ್ಮಕ್ಕಳು. ಈ ಮಕ್ಕಳ ತಂದೆ ಸಿದ್ರಾಯಿ, ತಾಯಿ ಬಸವ್ವ ಎರಡೂವರೇ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಅಂದಿನಿಂದ ಈ ಮೊಮ್ಮಕ್ಕಳಿಗೆ ಈ ಅಜ್ಜಿಯೇ ಆಸರೆ. ರತ್ನಮ್ಮ ಮೃತಪಟ್ಟ ಬಸವ್ವ ಅವರ ತಾಯಿ.
ಇರಲು ಮನೆ ಇಲ್ಲ. ಬೇರೆಯವರ ಮನೆಯಲ್ಲೆ ಈ ಎಲ್ಲಾ ಮೊಮ್ಮಕ್ಕಳನ್ನು ಕಟ್ಟಿಕೊಂಡು, ಕೂಲಿ-ನಾಲಿ ಮಾಡಿ ಈ ರತ್ನಮ್ಮ ಕಷ್ಟದ ಬದುಕು ಸವೆಸುತ್ತಿದ್ದಾಳೆ. ಚುನಾವಣೆ ವೇಳೆ ಮತ ಕೇಳಲು ಬರುವ ರಾಜಕಾರಣಿಗಳು ಗೆದ್ದ ಬಳಿಕ ಬಡವರ ಕಷ್ಟವನ್ನು ಕೇಳುವ ಮನಸ್ಸು ಮಾಡದಿರುವುದು ನಿಜಕ್ಕೂ ದುರಂತ. ಈ ಕುಟುಂಬಕ್ಕೆ ರೇಷನ್ ಕಾರ್ಡ್ ಇಲ್ಲ. ಆ ಅಜ್ಜಿಗೆ ವೃದ್ಧಾಪ್ಯವೇತನ, ವಿಧವಾವೇತನ, ಗೃಹಲಕ್ಷ್ಮೀ ಸೇರಿ ಸರ್ಕಾರದ ಯಾವೊಂದು ಸೌಲಭ್ಯವೂ ಸಿಗದೇ ಇರುವುದು ಆಡಳಿತಕ್ಕೆ ನಾಚಿಕೆಗೇಡು. ಕೂಲಿ ಮಾಡಿ ಬಂದ ಹಣದಲ್ಲೆ ರೇಷನ್ ಖರೀದಿಸಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದಾರೆ. ಹಾಗಾಗಿ ಇಂತಹ ಬಡಪಾಯಿಗಳಿಗೆ ಸರ್ಕಾರ ಆಸರೆಯಾಗಬೇಕು ಎನ್ನುತ್ತಾರೆ ಸ್ಥಳೀಯ ಪ್ರಜ್ಞಾವಂತ ನಾಗರಿಕರು.
9 ಮೊಮ್ಮಕ್ಕಳಿಗೆ ಅಜ್ಜಿಯೇ ಆಸರೆ: ರತ್ನಮ್ಮನ ಮೊಮ್ಮಕ್ಕಳಲ್ಲಿ 3 ವರ್ಷದಿಂದ 24 ವರ್ಷ ವಯಸ್ಸಿನವರಿದ್ದು, 6 ಗಂಡು, 3 ಹೆಣ್ಣು ಮಕ್ಕಳಿದ್ದಾರೆ. ಮೊದಲನೇ ಹುಡುಗಿ ಸಿದ್ದವ್ವ(24) ಅವರನ್ನು ಅಜ್ಜಿಯೇ ಮದುವೆ ಮಾಡಿ ಕೊಟ್ಟಿದ್ದಾಳೆ. ದೊಡ್ಡ ಮೊಮ್ಮಗ ದುರ್ಗೇಶ ಪೂಜೇರಿ(23), 2ನೇಯವ ಬಾಳೇಶ(18) ಶಾಲೆ ಬಿಟ್ಟಿದ್ದು, ಕೂಲಿ ಕೆಲಸಕ್ಕೆ ಹೋಗಿ ಸ್ವಲ್ಪಮಟ್ಟಿಗೆ ರತ್ನಮ್ಮನಿಗೆ ನೆರವಾಗಿದ್ದಾರೆ. ಇನ್ನು ದರ್ಶನ(14) 8ನೇ ತರಗತಿ, ಸಚಿನ(8) 2ನೇ ತರಗತಿ, ಭಾರತಿ(7) 2ನೇ ತರಗತಿಯನ್ನು ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇನ್ನುಳಿದಂತೆ ಲಕ್ಷ್ಮೀ(5), ಸಂತೋಷ(4), ಬಸವರಾಜ(3) ಅಂಗನವಾಡಿಗೆ ಹೋಗುತ್ತಾರೆ. 'ಕೊನೆಯ ಕೂಸು ಬಸವರಾಜ 3 ತಿಂಗಳದ್ದಿತ್ರಿ, ಅವನನ್ನು ನನ್ನ ತೊಡಿ ಮ್ಯಾಲ ಕುಂಡರಿಸಿ ಅವರ ಅವ್ವ ಸತ್ತು ಹೋದಳ್ರಿ' ಎಂದು ರತ್ನಮ್ಮ ತಮ್ಮ ನೋವು ತೋಡಿಕೊಂಡರು.
ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನ ಗೃಹಪ್ರವೇಶ: ಈ ಅಜ್ಜಿ ಮತ್ತು ಮೊಮ್ಮಕ್ಕಳ ಸಂಕಷ್ಟ ಕಣ್ಣಲ್ಲಿ ನೋಡಲಾಗದೇ ಚಿತ್ರನಟ ಸುದೀಪ್ ಅವರ ಅಭಿಮಾನಿ ಆಗಿರುವ ಆದಿಶೇಷ ನಾಯಕ ಎಂಬುವವರು ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಸಿ ಕೊಡುತ್ತಿದ್ದಾರೆ. ಆಗಸ್ಟ್ 15ರಂದು ಕೆಲಸ ಶುರುವಾಗಿದ್ದು, 20×30 ಜಾಗದಲ್ಲಿ ಮನೆ ನಿರ್ಮಾಣವಾಗುತ್ತಿದೆ. ಒಂದು ಹಾಲ್, ಅಡುಗೆ ಕೋಣೆ ಇದ್ದು, ಬಹುತೇಕ ಮನೆ ಪೂರ್ಣಗೊಂಡಿದೆ. ಈಗ ಗಿಲಾವ್ (ಗಾರೆ) ಕೆಲಸ ನಡೆಯುತ್ತಿದೆ. ಪೇಂಟಿಂಗ್, ವೈರಿಂಗ್ ಮಾಡಿಸುವುದಷ್ಟೇ ಬಾಕಿ ಇದೆ. ಆದಿಶೇಷ ಅವರೇ ಮುಂದೆ ನಿಂತು ಹಗಲು ರಾತ್ರಿ ಎನ್ನದೇ ಮನೆ ಕೆಲಸ ಮಾಡಿಸುತ್ತಿದ್ದು, ಸೆ.2ರಂದು ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವತ್ತೆ ಗೃಹಪ್ರವೇಶ ಮಾಡುವ ಆಶಯ ಹೊಂದಿದ್ದಾರೆ.
0 Comments: